Monday, September 4, 2017

ಚಂದನ ಧಾರಾವಾಹಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮ.......ಮೋದ--ಖೇದಮಿತ್ರರೆ,
ದೂರದರ್ಶನದ ‘ಚಂದನ’ ವಾಹಿನಿಯಲ್ಲಿ ‘ಥಟ್ ಅಂತ ಹೇಳಿ’ ಎನ್ನುವ ರಸಪ್ರಶ್ನೆಯ ಕಾರ್ಯಕ್ರಮವನ್ನು ನೀವು ಕೇಳಿರಬಹುದು. ರಾತ್ರಿ ೯:೩೦ರಿಂದ ೧೦ ಗಂಟೆಯವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ನನ್ನ ನೆಚ್ಚಿನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ನಿರ್ವಾಹಕರಾದ ಡಾ^| ಸೋಮೇಶ್ವರರು ಸಹ ನನ್ನ ನೆಚ್ಚಿನ ನಿರ್ವಾಹಕರು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯವ್ಯಕ್ತಿಗಳ ಸಂದರ್ಶನವನ್ನೂ ಸಹ ಜರುಗಿಸಲಾಗಿದೆ. ನಮ್ಮೆಲ್ಲರ ಮೆಚ್ಚಿನ ಬ್ಲಾ^ಗರ್ ಶ್ರೀ ಪ್ರಕಾಶ ಹೆಗಡೆಯವರೂ ಸಹ ಈ ಸಂದರ್ಶನ-ಕಾರ್ಯಕ್ರಮದಲ್ಲಿ ಒಮ್ಮೆ ಭಾಗಿಯಾಗಿದ್ದರು.

ಈ ಕಾರ್ಯಕ್ರಮವನ್ನು ತಪ್ಪದೆ ಆಲಿಸಿ ಆನಂದಿಸುವ ನಾನು ಕೆಲವೊಮ್ಮೆ ಖೇದವನ್ನೂ ಪಟ್ಟಿದ್ದೇನೆ. ಅಂತಹ ನೋವಿನ ವಿಷಯವನ್ನು ನಿಮ್ಮೆದುರಿಗೆ ಇಡುವುದು ನನಗೆ ಅನಿವಾರ್ಯವಾಗಿದೆ. ‘ಥಟ್ ಅಂತ ಹೇಳಿ’ ರಸಪ್ರಶ್ನೆಯಲ್ಲಿ ತಪ್ಪುಗಳು ನುಸಳಬಾರದು. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವದರಿಂದ  ಹಾಗು ಅನೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಕೇಳುಗರಾಗಿರುವದರಿಂದ, ಅತ್ಯಂತ ಸಣ್ಣ ತಪ್ಪೂ ಸಹ ರಸಪ್ರಶ್ನೆಗಳ ಉತ್ತರದಲ್ಲಿ ಬರಬಾರದು, ಅಲ್ಲವೆ?

ಆದರೆ, ತಪ್ಪು ಮಾಹಿತಿಗಳು, ತಪ್ಪು ಭಾಷಾಪ್ರಯೋಗಗಳು ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಧಾರಾಳವಾಗಿ ಸೇರಿಕೊಳ್ಳುತ್ತಿರುವದರಿಂದ, ಇಂತಹ ತಪ್ಪುಗಳನ್ನು ಕಾರ್ಯಕ್ರಮದ ಯೋಜಕರ ಎದುರಿಗೆ ತರಲೇಬೇಕು. ಚಂದನವಾಹಿನಿಗೆ ನೇರವಾಗಿ ಬರೆದರೆ, ಆ ಕಾಗದವು ಎಲ್ಲಿ ಹೋಗಿ ಬೀಳುತ್ತದೆಯೋ ತಿಳಿಯದು. ಆದುದರಿಂದ ಈ ತಪ್ಪುಗಳನ್ನು ಸಾರ್ವಜನಿಕ ನಜರಿನಲ್ಲಿ ತರುವ ಉದ್ದೇಶದಿಂದ ಇಲ್ಲಿ ಪ್ರಸ್ತಾವಿಸುತ್ತಿದ್ದೇನೆ.

(ಅ) ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಕೇಳಲಾದ ತಪ್ಪು ಪ್ರಶ್ನೆಗಳು ಅಥವಾ ತಪ್ಪು ಉತ್ತರಗಳು ಹೀಗಿವೆ:

(೧) ದಿನಾಂಕ ೧೬/೮/೧೭ರಂದು ಕೇಳಲಾದ ಪ್ರಶ್ನೆ (ಕ್ರಮಾಂಕ ೨):
ಭಾರತವು ಬ್ರಿಟಿಶ್ ಸಾಮ್ರಾಜ್ಯದ ವಸಾಹತು ಆಗಿದ್ದು ಎಲ್ಲಿಯವರೆಗೆ?
ನಿರ್ವಾಹಕರು ಕೊಟ್ಟ ಉತ್ತರ: ದಿನಾಂಕ ೨೬-೧-೧೯೫೦ರವರೆಗೆ.

ನನ್ನ ತಕರಾರು: ನಿರ್ವಾಹಕರು ಹೀಗೆ ಕೇಳಬೇಕಾಗಿತ್ತು: ‘ಭಾರತವು ಬ್ರಿಟಿಶ್ ಸಾಮ್ರಾಜ್ಯದ ಸ್ವಯಮಾಡಳಿತ ಪ್ರದೇಶವಾಗಿದ್ದು ಎಲ್ಲಿಯವರೆಗೆ?’

ವಸಾಹತು ಅಂದರೆ colony. ‘‘‘ಯಾವುದೇ ಒಂದು ಸಾಮ್ರಾಜ್ಯದ ಸ್ವಯಮಾಡಳಿತ ಪ್ರದೇಶ ಅಂದರೆ dominion.
ಬ್ರಿಟಿಶರು India Independence Actನಲ್ಲಿ ಭಾರತಕ್ಕೆ Commonwealthದ dominion ರಾಷ್ಟ್ರವನ್ನಾಗಿ ಮಾಡಿದ ಠರಾವನ್ನು ಅಂಗೀಕರಿಸಿದ್ದಾರೆ.  ಭಾರತವು ೧೫-೮-೧೯೪೭ರಂದು ಬ್ರಿಟಿಶ್ ವಹಾಸತುಸ್ಥಿತಿಯಿಂದ ಮುಕ್ತವಾಯಿತು; ಹಾಗು ೨೬/೧/೧೯೫೦ರಂದು ಭಾರತವು ತನ್ನ ಸಂವಿಧಾನದ ಮೇರೆಗೆ dominion statusನಿಂದ ಮುಕ್ತವಾಗಿ, ಸಂಪೂರ್ಣ ಸ್ವತಂತ್ರ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು.

(dominion ಪದದ ಅರ್ಥವನ್ನು ಗೂಗಲ್ ಆಂಗ್ಲ ಪದಕೋಶದಲ್ಲಿ ಹೀಗೆ ಕೊಡಲಾಗಿದೆ:
a territory constituting a self-governing commonwealth and being one of a number of such territories united in a community of nations, or empire.
ಆದುದರಿಂದ ವಸಾಹತು ಪದದ ಬದಲಾಗಿಬ್ರಿಟಿಶ್ ಸಾಮ್ರಾಜ್ಯದ ಸ್ವಯಮಾಡಳಿತ ಪ್ರದೇಶಎಂದು ಹೇಳುವುದು ಸಮರ್ಪಕವಾಗುತ್ತದೆ. ೨೬--೧೯೫೦ರ ಬಳಿಕ, ಭಾರತವು commonwealthದಲ್ಲಿ ಒಂದು ಗಣರಾಜ್ಯವಾಗಿ ಉಳಿದುಕೊಂಡಿತೇ ಹೊರತು dominion ಆಗಿ ಅಲ್ಲ.
ಆದುದರಿಂದ ಪ್ರಶ್ನೆಯನ್ನಾದರೂ ಬದಲಾಯಿಸಬೇಕು ಅಥವಾ ಉತ್ತರವನ್ನಾದರೂ ಬದಲಾಯಿಸಬೇಕು.

(೨) ಇದೇ ದಿನಾಂಕದಂದು ಕೇಳಲಾದ ಮತ್ತೊಂದು ಪ್ರಶ್ನೆ: ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ:
ನಿರ್ವಾಹಕರ ಉತ್ತರ: ಗೋಪಾಲಕೃಷ್ಣ ಗೋಖಲೆ.

ನನ್ನ ತಕರಾರು: ಉತ್ತರವೇನೊ ಸರಿಯಾಗಿದೆ. ಆದರೆ ನಿರ್ವಾಹಕರು ತಮ್ಮ ಹೆಚ್ಚಿನ ವಿವರಣೆಯಲ್ಲಿ ಇವರನ್ನುತೀವ್ರಗಾಮಿ  (extremist) ಎಂದು ಕರೆದಿದ್ದು ಆಶ್ಚರ್ಯಕರವಾಗಿದೆ. ಗೋಖಲೆಯವರು ಮಂದಗಾಮಿ(moderate) ಧುರೀಣರಾಗಿದ್ದರು. ಇತರ ಮಂದಗಾಮಿ ಧುರೀಣರೆಂದರೆ ದಾದಾಭಾಯಿ ನವರೋಜಿ, ಫಿರೋಝ ಶಾಹ ಮೆಹತಾ, ಪಂಡಿತ ಮದನಮೋಹನ ಮಾಲವೀಯ ಮೊದಲಾದವರು.
ತೀವ್ರಗಾಮಿ ಧುರೀಣರೆಂದರೆ: ‘ಲಾಲ-ಬಾಲ-ಪಾಲಎಂದು ಹೆಸರಾದ ಲಾಲಾ ಲಜಪತ ರಾಯ, ಬಾಲಗಂಗಾಧರ ತಿಲಕ ಹಾಗು ಬಿಪಿನ್ಚಂದ್ರ ಪಾಲ; ಅಲ್ಲದೆ ಅರವಿಂದ ಘೋಷ ಮೊದಲಾದವರು.

ಇತ್ತೀಚೆಗೆ ಕರ್ನಾಟಕ ಸರಕಾರವು ಪ್ರಕಟಿಸುತ್ತಿರುವ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಗೋಖಲೆಯವನ್ನು ತೀವ್ರಗಾಮಿ ಎಂದು ತಪ್ಪಾಗಿ ಹೇಳಲಾಗಿದ್ದರೆ, ಹಾಗು ಆಧಾರದ ಮೇಲೆ ಚಂದನ ವಾಹಿನಿಯ ಯೋಜಕರು ಗೋಖಲೆಯವರನ್ನು ತೀವ್ರಗಾಮಿ ಎಂದು ತಪ್ಪಾಗಿ ಹೇಳಿದ್ದರೆ,  ನಿರ್ವಾಹಕರು ತಪ್ಪಿಗೆ ಹೊಣೆಗಾರರಾಗುವುದಿಲ್ಲ . ಅಂತಹ ಸಂದರ್ಭದಲ್ಲಿ ನಿರ್ವಾಹಕರ ಕ್ಷಮೆಯನ್ನು ಕೋರುತ್ತೇನೆ.

 (೩) ಇದೇ ದಿನದಂದು ಕೇಳಲಾದ ಚಟ್‍ಪಟ್ ಚಿನಕುರಳಿಯಲ್ಲಿ ಕೇಳಲಾದ ಪ್ರಶ್ನೆ: ‘ಭಾರತದ ರಾಷ್ಟ್ರಗೀತೆಯಲ್ಲಿ ಮೂಲಗೀತೆಯ ಎಷ್ಟು ಪಂಕ್ತಿಗಳಿವೆ?’
ನಿರ್ವಾಹಕರ ಉತ್ತರ: ‘ಮೂಲಗೀತೆಯ ಐದು ಪಂಕ್ತಿಗಳಲ್ಲಿ ಒಂದು ಪಂಕ್ತಿ ಇದೆ.’

ನನ್ನ ತಕರಾರು: ಪಂಕ್ತಿ ಎಂದರೆ ‘ಸಾಲು’. ಮೂಲಗೀತೆಯಲ್ಲಿ ಐದು ‘ನುಡಿ’ಗಳಿವೆ, ಐದು ಪಂಕ್ತಿಗಳಲ್ಲ!
ನಿರ್ವಾಹಕರು ‘ಮೂಲಗೀತೆಯ ನುಡಿಗಳಲ್ಲಿ..’ ಎಂದು ಕೇಳಬೇಕಾಗಿತ್ತು ಅಥವಾ ಮೊದಲನೆಯ ನುಡಿಯಲ್ಲಿ ಎಷ್ಟು ಪಂಕ್ತಿಗಳು (ಸಾಲುಗಳು) ಇವೆ ಎಂದು ಕೇಳಬೇಕಾಗಿತ್ತು. ಇಂತಹ ತಪ್ಪಿನಿಂದಾಗಿ ಕೇಳುಗರು ಪಂಕ್ತಿ ಎಂದರೆ ‘ನುಡಿ’ ಎಂದು ತಪ್ಪಾಗಿ ತಿಳಿಯುವರು.

(೪) ದಿನಾಂಕ ೨೨/೮/೧೭ರಂದು ಕೇಳಲಾದ ನಾಲ್ಕನೆಯ ಪ್ರಶ್ನೆ: ‘ಹೂವಿನಲ್ಲಿ ಹೂವು’ ಯಾವುದು ಹೇಳಿ.
ನಿರ್ವಾಹಕರು ಕೊಟ್ಟ ಉತ್ತರ: ‘ಹತ್ತಿಯಹೂವು’.
ನನ್ನ ತಕರಾರು: ಪ್ರಶ್ನೆ ಸ್ಪಷ್ಟವಿಲ್ಲ. ಅಭ್ಯರ್ಥಿಗಳುಹೂವಿನಲ್ಲಿಯೇ ಹುಟ್ಟಿದ ಹೂವುಎಂದು ಗ್ರಹಿಸಿ ಉತ್ತರ ಕೊಟ್ಟಿದ್ದಾರೆ. ಅವರ ಗ್ರಹಿಕೆಯನ್ನು ನಿರ್ವಾಹಕರು ತಪ್ಪು ಎಂದು ಘೋಷಿಸಿದರು. ‘ಹೂವಿನಲ್ಲಿ ಹೂವುಎಂದರೆ ಶ್ರೇಷ್ಠವಾದ ಹೂವು ಎಂದು ತಿಳಿಸಿ, ಅದನ್ನುಹತ್ತಿಯ ಹೂವುಎಂದು ತಿಳಿಸಿದರು. ಪ್ರಶ್ನೆಯೇ ಸಮರ್ಪಕವಾಗಿರದ ಕಾರಣ ತಮಗೆ ಬರಬಹುದಾದ ಗುಣಗಳಿಂದ ಅಭ್ಯರ್ಥಿಗಳು ವಂಚಿತರಾದರು.

(೫) ಹತ್ತನೆಯ ಪ್ರಶ್ನೆ :ಪದಬಂಧ
ಅಡ್ಡಪದಕ್ಕೆ ನೀಡಲಾದ ಸುಳಿವು: ದುಷ್ಟ ಆಶಯ ಅಥವಾ ಭಾವನೆ.
ನೀಡಲಾದ ಉತ್ತರ: ದುರಭಿಪ್ರಾಯ
ತಕರಾರು: ಕನ್ನಡದಲ್ಲಿಆಶಯಪದಕ್ಕೆ ಇರುವ ಅರ್ಥ= intention or thought
             ಕನ್ನಡದಲ್ಲಿಭಾವನೆಪದಕ್ಕೆ ಇರುವ ಅರ್ಥ= feeling or emotion
             ಕನ್ನಡದಲ್ಲಿಅಭಿಪ್ರಾಯಪದಕ್ಕೆ ಇರುವ ಅರ್ಥ= opinion
‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಯೋಜಕರು ಇಂತಹ ಸೂಕ್ಷ್ಮಭೇದಗಳನ್ನು ಅರಿತುಕೊಳ್ಳಬೇಕು. ಇಲ್ಲವಾದಲ್ಲಿ ಕೇಳುಗರಲ್ಲಿ ತಪ್ಪು ಗ್ರಹಿಕೆಯು ಹುಟ್ಟುತ್ತದೆ.

(೬) ದಿನಾಂಕ ೩೦/೮/೧೭ರಂದು ಕೇಳಲಾದ ೧೦ನೆಯ ಪ್ರಶ್ನೆಯಲ್ಲಿ ನಮ್ಮ ಹಳೆಯ ರಾಷ್ಟ್ರಾಧ್ಯಕ್ಷ ಶ್ರೀ ವರಾಹಗಿರಿ ವೆಂಕಟಗಿರಿಯವರ ಚಿತ್ರವನ್ನು ತೋರಿಸಿ, ಅವರನ್ನು ಗುರುತಿಸಲು ಕೇಳಲಾಗಿದೆ.

ನಿರ್ವಾಹಕರು ಅವರ ಹೆಸರನ್ನು ‘ವರಾಹ ವೆಂಕಟಗಿರಿ’ ಎಂದು ತಪ್ಪಾಗಿ ಹೇಳಿದ್ದಾರೆ. ಇದು ತಪ್ಪು. ಇವರ ಹೆಸರು ವರಾಹಗಿರಿ ವೆಂಕಟಗಿರಿ. ಈ ತಪ್ಪಿನ ಸ್ಪಷ್ಟೀಕರಣಕ್ಕಾಗಿ ಒಂದು ಉದಾಹರಣೆ ಕೊಡುತ್ತೇನೆ: ‘ಮೋಹನದಾಸ ಕರಮಚಂದ ಗಾಂಧೀ’ ಇವರ ಹೆಸರನ್ನು ‘ಮೋಹನ ಕರಮ ಗಾಂಧೀ’ ಎಂದು ಹೇಳುವುದು ಸರಿಯಾದೀತೆ?

(೭) ದಿನಾಂಕ ನನಗೆ ನೆನಪಿಲ್ಲ. ಈ ರಸಪ್ರಶ್ನೆಯು ಪದಬಂಧಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಮೊದಲನೆಯ ಉದ್ದ ಸಾಲಿನಲ್ಲಿ ಮೂರಕ್ಷರದ ಪದವೊಂದು ಬೇಕಾಗಿದೆ. ನಡುವಿನ ಅಕ್ಷರವು ‘ನು’ ಎಂದಿದೆ. ಈ ಪದದ ಅರ್ಥ ‘ಮಗಳು’ ಎಂದು ನಿರ್ವಾಹಕರು ತಿಳಿಸಿದರು. ಈ ಸಮಸ್ಯೆಗೆ ಅಮೃತಾ ಹೆಗಡೆ ಎನ್ನುವ ಅಭ್ಯರ್ಥಿಯು ‘ತನುಜಾ’ ಎಂದು ಥಟ್ಟನೆ ಉತ್ತರ ನೀಡಿದರು. ನಿರ್ವಾಹಕರಾದ ಡಾ^|| ಸೋಮೇಶ್ವರರು ಇದನ್ನು ತಪ್ಪು ಎಂದು ಘೋಷಿಸಿದರು. ‘ತನುಜೆ’ ಎನ್ನುವುದು ಸರಿಯಾದ ಉತ್ತರ ಎಂದು ಶ್ರೀ ಸೋಮೇಶ್ವರರು ಹಟ ಹಿಡಿದರು. ಅಮೃತಾ ಅವರು, ‘ಸsರ್, ‘ತನುಜ:’ ಎನ್ನುವುದಕ್ಕೆ ‘ಮಗ’ ಎಂದೂ, ‘ತನುಜಾ’ ಎನ್ನುವುದಕ್ಕೆ ‘ಮಗಳು’ ಎಂದೂ ಅರ್ಥವಿದೆಯಲ್ಲವೆ?’ ಎಂದು ಕೇಳಿದರು. ಶ್ರೀ ಸೋಮೇಶ್ವರರು, ‘ತನುಜಾ ಎನ್ನುವುದು ಸಂಸ್ಕೃತ, ಕನ್ನಡದಲ್ಲಿ ‘ತನುಜೆ’ ಎನ್ನುವುದೇ ಸರಿ ಎಂದು ಸಾಧಿಸಿದರು.

ಭಪ್ಪರೆ, ಸೋಮೇಶ್ವರ! ಹಾಗಿದ್ದರೆ, ‘ಗಿರಿಜಾ’ ಎನ್ನುವ ಹುಡುಗಿಯ ಹೆಸರನ್ನು ಶಾಲಾದಾಖಲೆಗಳಲ್ಲಿ ನೀವು ‘ಗಿರಿಜಾ’ ಎಂದೇ ಬರೆಯುತ್ತೀರಿ ತಾನೆ? ಅಥವಾ ಅವಳ ಹೆಸರನ್ನು ‘ಗಿರಿಜೆ’ ಎಂದು ಬರೆಯುತ್ತೀರೊ? ತ್ರಿವೇಣಿಯವರ ಕಾದಂಬರಿಗಳಲ್ಲಿ ಅನೇಕ  ಸ್ತ್ರೀಪಾತ್ರಗಳು ಬರುತ್ತಿದ್ದು, ಆ ಪಾತ್ರಗಳ ಹೆಸರುಗಳನ್ನು ‘ಗೀತಾ, ಕನಕಾ, ರಮಾ, ಅಮೃತಾ…’ ಹೀಗೆಲ್ಲ ಬರೆಯಲಾಗಿದೆಯೇ ಹೊರತು, ‘ಗೀತೆ, ಕನಕೆ, ರಮೆ, ಅಮೃತೆ..’ ಎಂದು ಬರೆದಿಲ್ಲವಲ್ಲ! 

‘ತನುಜಾ’ ಎನ್ನುವುದು ವ್ಯಕ್ತಿನಾಮ ಹಾಗು ‘ತನುಜೆ’ ಎನ್ನುವುದು ಸರ್ವನಾಮ ಎಂದು ಹೇಳುತ್ತ, ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಹುದು. ಆದರೆ ಇದು ಕೂದಲನ್ನು ಸೀಳುವ ಪ್ರಯತ್ನವಷ್ಟೆ! ಡಾ^ಸೋಮೇಶ್ವರರೆ, ಈ ತಪ್ಪು ಕಾರ್ಯಕ್ರಮದ ಯೋಜಕರದಲ್ಲ. ಈ ತಪ್ಪಿನ ಹೊಣೆ ಸಂಪೂರ್ಣವಾಗಿ ನಿರ್ವಾಹಕರಾದ ನಿಮ್ಮ ಮೇಲೆಯೇ ಇದೆ.

‘ಥಟ್ಟನೆ ಹೇಳಿ’ ಕಾರ್ಯಕ್ರಮದಲ್ಲಿ ಯಾವುದೇ ಪ್ರಶ್ನೋತ್ತರವು ಸಂದಿಗ್ಧವಾಗಿ ಅಥವಾ ವಿವಾದಾಸ್ಪದವಾಗಿ ಇರಬಾರದು, ಅಲ್ಲವೆ? 

(೮) ದಿನಾಂಕ ೮/೮/೧೭ರಂದು ಕೇಳಲಾದ  ಪ್ರಶ್ನೆ (ಕ್ರಮಾಂಕ ೩) : ಕಾ^ಡ್‍ಲಿವರ ಎಣ್ಣೆಯಲ್ಲಿ ವ್ಹಿಟಮಿನ್ ‘ಏ’ ಎಷ್ಟು ಇರುತ್ತದೆ?
ನಿರ್ವಾಹಕರು ಕೊಟ್ಟ ಉತ್ತರ: ೩೦,೦೦೦ mg.
ನನ್ನ ತಕರಾರು : ಎಷ್ಟು ಪ್ರಮಾಣದ ಎಣ್ಣೆಯಲ್ಲಿ ಎಂದು ಹೇಳದೆ, ಕೇವಲ ೩೦,೦೦೦ mg ಎಂದಷ್ಟೇ ಹೇಳಿದ್ದಾರೆ. ಎರಡನೆಯದಾಗಿ ವ್ಹಿಟಮಿನ್ ಪ್ರಮಾಣವನ್ನು ‘IU’ ಮಾಪನದಲ್ಲಿ ಹೇಳುತ್ತಾರೆಯೇ ಹೊರತು mgಗಳಲ್ಲಿ ಅಲ್ಲ.
ಇದರ ಸರಿಯಾದ ಉತ್ತರ ಹೀಗಿದೆ: ೧೦೦ ಗ್ರಾಮುಗಳಲ್ಲಿ ೧,೦೦,೦೦೦ IU.

(೯) ೧೦/೮/೧೭ರಂದು ಕೇಳಲಾದ ಒಂದು ಪ್ರಶ್ನೆಯ ಉತ್ತರಕ್ಕೆ ವಿವರಣೆ ನೀಡುತ್ತ, ನಿರ್ವಾಹಕರು ‘ಗಾಳಿಯಂತ್ರಗಳ ಶಕ್ತಿ ಎನ್ನುವುದು ಸೌರಶಕ್ತಿಯ ಪರಿವರ್ತಿತ ರೂಪ’ ಎಂದು ಹೇಳಿದರು. ಈ ಅವೈಜ್ಞಾನಿಕ ಹಾಗು ತಪ್ಪು ವಿವರಣೆಯನ್ನು ಕೇಳಿ ನನಗೆ ದಿಗ್ಭ್ರಮೆಯಾಯಿತು.

ಗಾಳಿಯು ವಿದ್ಯುತ್ ಉತ್ಪಾದಕಗಳನ್ನು ತಿರುಗಿಸುವದರಿಂದ ವಿದ್ಯುತ್ ಉತ್ಪಾದನೆ ಆಗುತ್ತದೆ. ಅದರಂತೆ ಸೌರಕೋಶಗಳು ಸೌರಶಕ್ತಿಯನ್ನು ವಿದ್ಯುತ್‍ಗೆ ಪರಿವರ್ತಿಸುತ್ತವೆ. ಇವೆರಡಕ್ಕೂ ಸಂಬಂಧವೇ ಇಲ್ಲ. ನಿರ್ವಾಹಕರ ವಿವರಣೆಯು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ನೂಕುತ್ತದೆ. ಇದು ಅಕ್ಷಮ್ಯವಾದ ತಪ್ಪು.

(೧೦) ದಿನಾಂಕ ೮/೮/೧೭ರಂದು ಕೇಳಲಾದ ಮೊದಲನೆಯ ಪ್ರಶ್ನೆ ಹೀಗಿದೆ: ‘ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಇವರ ಕಾವ್ಯನಾಮವೇನು?’
ನನ್ನ ತಕರಾರು: ಕುಪ್ಪಳ್ಳಿ ಎನ್ನುವ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿದೆ. ಇದು ಕುವೆಂಪುರವರ ಊರು ಅಲ್ಲ.  ‘ಕುವೆಂಪು’ರವರ ಊರಿನ ಸರಿಯಾದ ಹೆಸರು: ಕುಪ್ಪಳಿ. ಇದು ಶಿವಮೊಗ್ಗಿ ಜಿಲ್ಲೆಯಲ್ಲಿದೆ. ಕಾರ್ಯಕ್ರಮದ ಯೋಜಕರು ಪ್ರಶ್ನೆಯನ್ನು ಹಾಗು ಉತ್ತರವನ್ನು ಒಮ್ಮೆ ಬಿಟ್ಟು ಎರಡು ಸಲ ಪರೀಕ್ಷಿಸಬೇಕು. ಇಲ್ಲವಾದಲ್ಲಿ ಇಂತಹ ತಪ್ಪುಗಳು ಕೇಳುಗರಿಗೆ ತಪ್ಪು ಮಾಹಿತಿಯನ್ನು ನೀಡುತ್ತವೆ.


(ಆ) ಇನ್ನು ಈ ಕಾರ್ಯಕ್ರಮದಲ್ಲಿ ಕಂಡು ಬಂದ ತಪ್ಪು ಉಚ್ಚಾರಗಳನ್ನು ಹಾಗು ತಪ್ಪು ಭಾಷಾಪ್ರಯೋಗಗಳನ್ನಷ್ಟು ನೋಡೋಣ:
(೧) ದಿನಾಂಕ ೧೨/೮/೧೭ರಂದು ಕೇಳಲಾದ ಪ್ರಶ್ನೆಯಲ್ಲಿ ಒಂದು ಕಟ್ಟಡವನ್ನು ತೋರಿಸಿ, ಅದನ್ನು ಗುರುತಿಸಲು ಕೇಳಲಾಗಿದೆ:
ನಿರ್ವಾಹಕರು ಕೊಟ್ಟ ಉತ್ತರ : ಸರ್ವೋಚ್ಛ ನ್ಯಾಯಾಲಯ.
 ನನ್ನ ತಕರಾರು: ‘ಸರ್ವೋಚ್ಚ’ ಎನ್ನುವುದು ಸರಿಯಾದ ಪದ. ಇದು ಸಂಸ್ಕೃತ ಪದವಾದ ಮಾತ್ರಕ್ಕೆ, ಈ ಪದದಲ್ಲಿ ಮಹಾಪ್ರಾಣ ಇರಬೇಕೆನ್ನುವುದು ತಪ್ಪು ಗ್ರಹಿಕೆ. ಇದರಂತೆ ಅಲ್ಪಪ್ರಾಣಿಯಾದ ಇತರ ಪದಗಳು: ಉಚ್ಚ, ಸಮುಚ್ಚಯ, ಮುಷ್ಟಿ ಇತ್ಯಾದಿ. ಮಹಾಪ್ರಾಣವಿರುವ ಕೆಲವು ಪದಗಳು: ಪಾಪಿಷ್ಠ, ಕೋಪಿಷ್ಠ ಇತ್ಯಾದಿ.

(೨) ದಿನಾಂಕ ೧೪/೮/೧೭ರಂದು ಕೇಳಲಾದ ೪ನೆಯ ಕ್ರಮಾಂಕದ ಪ್ರಶ್ನೆಗೆ ನಿರ್ವಾಹಕರು ನೀಡಿದ ಉತ್ತರ: ಜಲಿಯನ್‍ವಾಲಾ ಭಾಗ್.
ನನ್ನ ತಕರಾರು: ಭಾಗ್ ಎಂದರೆ ಹಿಂದಿಯಲ್ಲಿ ‘ಓಡು’ ಎನ್ನುವ ಅರ್ಥವಿದೆ. ಈ ಸ್ಥಳದ ಸರಿಯಾದ ಹೆಸರು ‘ಜಲಿಯನ್‍ವಾಲಾ ಬಾಗ’. (ಬಾಗ ಎಂದರೆ ಹಿಂದಿಯಲ್ಲಿ ತೋಟ ಎಂದರ್ಥ.)

(೩) ದಿನಾಂಕ ೧೬/೮/೧೭ರಂದು ಕೇಳಲಾದ ಮೊದಲನೆಯ ಪ್ರಶ್ನೆ ಹೀಗಿದೆ:
‘ಗದರ್’ ಪಕ್ಷವನ್ನು ಕಟ್ಟಿದವರು ಯಾರು?
ನಿರ್ವಾಹಕರು ಕೊಟ್ಟ ಉತ್ತರ: ರಾಸಬಿಹಾರಿ ಬೋಸ್.
ನನ್ನ ತಕರಾರು: ‘ಗದರ್’ ಎನ್ನುವುದು ತಪ್ಪು ಉಚ್ಚಾರ. ‘ಗದ್ದಾರ್’ ಎನ್ನುವುದು ಸರಿಯಾದ ಉಚ್ಚಾರ.
ಈ ಹಿಂದೀ ಪದದ ಅರ್ಥ : ಬಂಡಾಯಗಾರ.

(೪) ದಿನಾಂಕ ೧೮/೮/೧೭ರಂದು ಕೇಳಲಾದ ಹತ್ತನೆಯ ಪ್ರಶ್ನೆ ‘ಪದಬಂಧ’ದಲ್ಲಿ ಆಡ್ಡ ಸಾಲಿನಲ್ಲಿ ನಿರ್ವಾಹಕರು ಸರಿ ಉತ್ತರವನ್ನು ‘ಬಿಕಾಜಿ ಕಾಮಾ’ ಎಂದು ಹೇಳಿದ್ದಾರೆ.
ಈ ಸಮಸ್ಯೆಯ ಸರಿಯಾದ ಉತ್ತರ : ‘ಭೀಕಾಜಿ ಕಾಮಾ’.
ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಈ ಗೌರವಾನ್ವಿತ ಮಹಿಳೆಯ ಹೆಸರನ್ನು ಈ ರೀತಿ ಕೆಡಿಸಬಾರದು.

(೫) ಇದರಂತೆ ಅದೇ ದಿನದಂದು ‘ಚಟ್‍ಪಟ್ ಚಿನಕುರಳಿ’ಯಲ್ಲಿ ಕೇಳಲಾದ ಪ್ರಶ್ನೆಯ, ಮತ್ತೊಮ್ಮೆ ದಿನಾಂಕ ೨೩/೮/೧೭ರಂದು ಕೇಳಲಾದ ೯ನೆಯ ಪ್ರಶ್ನೆಗೆ ನಿರ್ವಾಹಕರು ನೀಡಿದ ಉತ್ತರ: ಸುಭಾಶ ಚಂದ್ರ ಬೋಸ್.
ಸರಿಯಾದ ಉತ್ತರ : ಸುಭಾಸಚಂದ್ರ ಬೋಸ್.
ಸಂಸ್ಕೃತದಲ್ಲಿ ಭಾಸ ಎನ್ನುವ ಪದಕ್ಕೆ ಹೊಳೆಯುವ ಎನ್ನುವ ಅರ್ಥವಿದೆ.
(ಸುಭಾಸಚಂದ್ರ = ಕಾಂತಿಮಂತನಾಗಿ ಹೊಳೆಯುವ ಚಂದ್ರ)
ಸಂಸ್ಕೃತದಲ್ಲಿ ಭಾಶ್ ಎನ್ನುವ ಪದವೇ ಇಲ್ಲ. (ಭಾಷ್ ಎನ್ನುವ ಪದವಿದ್ದು ಅದರರ್ಥ ‘ನುಡಿ’ ಎಂದಾಗುತ್ತದೆ.)

(೬)೨೩/೮/೧೭ರ ‘ಚಟ್‍ಪಟ್ ಚಿನಕುರಳಿ’ಯಲ್ಲಿ ಕೇಳಲಾದ ಪ್ರಶ್ನೆಗೆ ನಿರ್ವಾಹಕರು ‘ನೀಲ್ಸ ಬೋರ್’ ಎನ್ನುವ ಉತ್ತರವನ್ನು ನೀಡಿದ್ದಾರೆ. Niels Bohr ಹೆಸರಿನ ಸರಿಯಾದ ಉಚ್ಚಾರ: ನಿಯಲ್ಸ್ ಬೋರ್
ಈ ಪರಕೀಯನ ಹೆಸರಿನ ಸರಿಯಾದ ಉಚ್ಚಾರ ನಮಗೇಕೆ ಬೇಕು ಎಂದು ಕೆಲವರು ಕೇಳಬಹುದು. ಸರಿಯಾದ ಉಚ್ಚಾರವನ್ನು Google Searchದಿಂದ ತಕ್ಷಣವೇ ತಿಳಿದುಕೊಳ್ಳಲು ಸಾಧ್ಯವಿರುವಾಗ, ಕನ್ನಡದಲ್ಲಿ ಈ ಪದಗಳನ್ನು ಉಚ್ಚರಿಸಲು ಹಾಗು ಬರೆಯಲು ಸಾಧ್ಯವಿರುವಾಗ, ನಾವು ತಪ್ಪುಗಳನ್ನು ಏಕೆ ಮಾಡಬೇಕು? ಉದಾಹರಣೆಗೆ, ಆಂಗ್ಲರಿಂದ ಪ್ರಭಾವಿತರಾದ ನಾವು ಅವರಂತೆಯೆ ಅನೇಕ ತಪ್ಪು ಉಚ್ಚಾರಗಳನ್ನು ಮಾಡುತ್ತೇವೆ. Marie Curie ಎನ್ನುವ ಹೆಸರನ್ನು ‘ಮಾರಿ ಕುರಿ’ ಎನ್ನುವ ಬದಲಾಗಿ, ‘ಮೇರಿ ಕ್ಯೂರಿ’ ಎನ್ನುತ್ತೇವೆ. ‘ಯೇಶು’ ಎನ್ನುವ ಬದಲಾಗಿ ಜೀಸಸ್ ಎಂದು ಹೇಳುತ್ತೇವೆ. ಯಾಕಾದರೂ ನಾವು ತಪ್ಪು ಮಾಡಬೇಕು? ನಾವೇನು ಆಂಗ್ಲರ ಹಿಂಬಾಲಕರೆ? ನಮಗೇಕೆ ಆಂಗ್ಲವ್ಯಾಮೋಹ?

(೭) ಇದೆಲ್ಲ ಹೋಗಲಿ ಬಿಡಿ, ಭಾರತೀಯ ಹೆಸರುಗಳನ್ನಾದರೂ ನಾವು ಸರಿಯಾಗಿ ಉಚ್ಚರಿಸುತ್ತೇವೆಯೆ?
ದಿನಾಂಕ ೧೨/೮/೧೭ರಂದು ಕೇಳಲಾದ ೭ನೆಯ ಪ್ರಶ್ನೆಗೆ ನಿರ್ವಾಹಕರು ಕೊಟ್ಟ ಉತ್ತರ; ‘ಟಾಟಾಪಾನಿ.’
ಸ್ವಾಮಿ, ಇಂಗ್ಲೀಶಿನಲ್ಲಿ ‘Tatapani’ ಎಂದು ಬರೆದಿದ್ದನ್ನು ಓದಿ, ನೀವು ‘ಟಾಟಾಪಾನಿ’ ಎಂದು ಹೇಳಿಬಿಟ್ಟಿರಿ. ಆ ಊರಿನ ಸರಿಯಾದ ಹೆಸರು; ‘ತಾತಾಪಾನಿ’! ನಮ್ಮ ಭಾರತೀಯ ಹೆಸರುಗಳನ್ನಾದರೂ ಸರಿಯಾಗಿ ಹೇಳಿರಿ, ಗುರುಗಳೆ. ನಾವೇನೂ ಆಂಗ್ಲರಲ್ಲವಲ್ಲ!
(ಟಿಪ್ಪಣಿ: ಇದೇ ರೀತಿಯಲ್ಲಿ ರಬೀಂದ್ರನಾಥ ಠಾಕೂರ ಇವರ ಹೆಸರನ್ನು ಅನೇಕರು ರವೀಂದ್ರನಾಥ ಟ್ಯಾಗೋರ್ ಎಂದು ಬರೆಯುವದನ್ನು ನೋಡಿದ್ದೇನೆ. ಭಾರತವು ಸ್ವತಂತ್ರವಾಗಿ ೭೦ ವರ್ಷಗಳಾದ ಬಳಿಕ ಸಹ ಈ ಆಂಗ್ಲಶೈಲಿಯನ್ನು ಕುರುಡಾಗಿ ಅನುಸರಿಸುವ ಕಾರಣ ತಿಳಿಯುತ್ತಿಲ್ಲ!)

(೮) ಇದರಂತೆ ೨೩/೮/೧೭ರಂದು ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಯೋಜಕರು ಅಥವಾ ನಿರ್ವಾಹಕರು ಮತ್ತೊಂದು ಅಕ್ಷಮ್ಯ ಅಪಚಾರವನ್ನು ಮಾಡಿದ್ದಾರೆ.
ಮಹಾರಾಷ್ಟ್ರದ ‘ಮಹಾಡ’ ಎನ್ನುವ ಊರಿನಲ್ಲಿ ಇದ್ದಂತಹ ಸಾರ್ವಜನಿಕ ಕೆರೆಯಿಂದ ನೀರು ತೆಗೆದುಕೊಳ್ಳಲು ದಲಿತರಿಗೆ ಅವಕಾಶವಿರಲಿಲ್ಲ. ಡಾ^| ಅಂಬೇಡಕರರು ದಿನಾಂಕ ೧೯-೩-೧೯೨೭ರಂದು ಇದನ್ನು ವಿರೋಧಿಸಿ ಒಂದು ಪ್ರಬಲವಾದ ಪ್ರತಿಭಟನೆಯನ್ನು ಆಯೋಜಿಸಿದರು. ಈ ‘ಮಹಾಡ’ ಎನ್ನುವ ಊರಿನ ಹೆಸರನ್ನು‘ಥಟ್ ಅಂತ ಹೇಳಿ’  ಕಾರ್ಯಕ್ರಮದ ಫಲಕದಲ್ಲಿ ‘ಮಹದ್’ ಎಂದು ಬರೆಯಲಾಗಿತ್ತು ಹಾಗು ನಿರ್ವಾಹಕರು ಅದನ್ನು ‘ಮಹದ್’ ಎಂದೇ ಉಚ್ಚರಿಸಿದರು. ಬಹುಶ: ಇಂಗ್ಲೀಶಿನ `Mahad’ ಎನ್ನುವ ಪದವನ್ನು ನೋಡಿ, ಇವರು ಅದನ್ನು ‘ಮಹದ್’ ಎಂದು ತಿಳಿದಿರಬಹುದು. ಅಯ್ಯಾ ಸ್ವಾಮಿ, ಗೂಗಲ್ ಸರ್ಚನ್ನು ನೋಡಿದ್ದರೆ, ನಿಮಗೆ ಎರಡೇ ನಿಮಿಷದಲ್ಲಿ ಸರಿಯಾದ ಉಚ್ಚಾರ ಹಾಗು ಬರವಣಿಗೆ ತಿಳಿದು ಬಿಡುತ್ತಿತ್ತಲ್ಲ. ಇದೀಗ ವಿದ್ಯಾರ್ಥಿಗಳಲ್ಲಿ ನಮ್ಮ ದೇಶದ ಒಂದು ಮಹತ್ವದ ಪ್ರತಿಭಟನೆಯು ನಡೆದಿರುವ ಸ್ಥಳದ ಬಗೆಗೆ, ನೀವು ಎಂತಹ ತಪ್ಪು ತಿಳಿವಳಿಕೆಯನ್ನು ಮೂಡಿಸಿ ಬಿಟ್ಟಿರಲ್ಲ!  ಯಾಕೆ? ಯಾಕೆ? ಯಾಕೆ? ಯೋಜಕರಿಗಾಗಲಿ, ನಿರ್ವಾಹಕರಿಗಾಗಲಿ ಸ್ವಲ್ಪ ಸಂಶೋಧನೆ ಮಾಡಲೂ ಸಹ ಅನಾಸಕ್ತಿ ಹಾಗು ಆಲಸ್ಯವೆ?

(೯) ಇದರಂತೆಯೆ, Mohenjo daroದ ಬಗೆಗೆ ಸ್ವಲ್ಪ ಹೇಳಬೇಕಾಗಿದೆ. ಈ ಊರು ಸಿಂಧ ಪ್ರಾಂತದಲ್ಲಿದೆ. ಸಿಂಧೀ ಜನರು ಇದನ್ನು ‘ಮುಅನಜೋ ದಡೊ’ ಎಂದು ಕರೆದರೆ, ಉರ್ದೂ ಭಾಷೆಯಲ್ಲಿ ಇದನ್ನು ‘ಮೋಹನಜೋ ದಡೊ’ ಎಂದು ಕರೆಯುತ್ತಾರೆ. ದಿನಾಂಕ ೨೯/೮/೧೭ರಂದು ಕೇಳಲಾದ ೮ನೆಯ ಪ್ರಶ್ನೆಗೆ ಉತ್ತರವಾಗಿ ಈ ಸ್ಥಳವನ್ನು ‘ಮೊಹೆಂಜೊದಾರೊ’ ಎಂದೇ ಹೇಳಲಾಗಿದೆ. ‘ಹಾಗೆ ಕರೆದರೆ ತಪ್ಪೇನು?’ ಎಂದು ಕೆಲವರು ಕೇಳಬಹುದು. ಮಾನ್ಯರೆ, ನಮ್ಮ ಬೆಂಗಳೂರನ್ನು ನಾವು ಇದೀಗ ‘ಬ್ಯಾಂಗಲೋರ್’ ಎಂದು ಕರೆಯುತ್ತೇವೆಯೆ? ಅಥವಾ ಹುಬ್ಬಳ್ಳಿಯನ್ನು ‘ಹುಬ್ಲಿ’ ಎನ್ನುತ್ತೇವೆಯೆ? ನಮ್ಮ ಊರುಗಳನ್ನು ಪರರು ಸರಿಯಾಗಿ ಉಚ್ಚರಿಸಬೇಕೆಂದು ನಾವು ಅಪೇಕ್ಷಿಸಿದರೆ, ಪರಸ್ಥಳಗಳನ್ನು ಸಹ ನಾವು ಸರಿಯಾಗಿ ಉಚ್ಚರಿಸಬೇಕಲ್ಲವೆ?

(೧೦) ಇನ್ನು ಗಣಿತಪ್ರಶ್ನೆಗಳಿಗೆ ಬರೋಣ. ಗಣಿತದಲ್ಲಿ ಕೂಡಿಸುವ, ಕಳೆಯುವ, ಗುಣಿಸುವ, ಭಾಗಿಸುವ ಕೆಲವು ಸಮಸ್ಯೆಗಳನ್ನು ಕೊಟ್ಟು, ಈ ಎಲ್ಲ ಸಮಸ್ಯೆಗಳ ಉತ್ತರಗಳನ್ನು ಸಂಕಲಿಸಿ, ಒಟ್ಟು ಉತ್ತರವನ್ನು ತಿಳಿಸಲು ಕೇಳಲಾಗುತ್ತದೆ. ಈ ಸಂದರ್ಭದಲ್ಲಿ ಈ ಎಲ್ಲ ಉತ್ತರಗಳನ್ನು ‘ಕೂಡಿಸಿ’ ಎಂದು ಹೇಳುವ ಬದಲಾಗಿ, ನಿರ್ವಾಹಕರು ‘ಕೂಡಿ’ ಎಂದು ಹೇಳುತ್ತಾರೆ. ‘ಕೂಡಿ’ ಎಂದರೆ ‘ಒಟ್ಟಾಗು’ ಎನ್ನುವ ಅರ್ಥ ಬರುತ್ತದೆಯೆ ಹೊರತು ‘ಒಟ್ಟಾಗಿಸು’ ಎನ್ನುವ ಅರ್ಥ ಬರುವದಿಲ್ಲ. ‘ಒಟ್ಟಾಗಿಸಿ’ ಎನ್ನುವದಕ್ಕೆ ‘ಕೂಡಿಸಿ’ ಎಂದು ಹೇಳಬೇಕಾಗುತ್ತದೆ.

ಇವೆಲ್ಲ ಕ್ಷುಲ್ಲಕ ಎನಿಸುತ್ತವಯೆ?  ಈ ಕ್ಷುಲ್ಲಕ  ಅಪಚಾರಗಳನ್ನು ಸಹಿಸಿಕೊಳ್ಳುತ್ತ ಹೋದರೆ, ಕನ್ನಡ ಭಾಷೆಯು ಕಾಲಕ್ರಮೇಣ ‘ಖನ್ನಡ’ವಾಗಿ ಹೋದೀತು! ನಮ್ಮ ನುಡಿಯನ್ನು ಸರಿಯಾದ ರೀತಿಯಲ್ಲಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾನಂತೂ ಈ ಲೇಖನದ ಮೂಲಕ ಈ ದಿಶೆಯಲ್ಲಿ ನನ್ನ ಅಳಿಲುಸೇವೆಯನ್ನು ಸಲ್ಲಿಸಿದ್ದೇನೆ. ಇದನ್ನು ಚಂದನದ ಕಾರ್ಯಕ್ರಮಯೋಜಕರು ಗಮನಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Monday, July 10, 2017

ವಚನಗಳ ಮೂಲಕ ಬಸವೇಶ್ವರರ ದರ್ಶನಬಸವಣ್ಣನವರ ವ್ಯಕ್ತಿತ್ವವು ಸಾಮಾನ್ಯ ಅರಿವಿಗೆ ಮೀರಿದಂತಹದು. ಅನಂತವಾದ ಆಕಾಶವನ್ನು ಅಥವಾ ತಳವಿಲ್ಲದ ಸಮುದ್ರವನ್ನು ಅರಿತುಕೊಳ್ಳುವುದು ಸುಲಭವೆ? ಬಸವಣ್ಣನವರನ್ನು ಗುರುತಿಸಲು ಮಾಡುವ ಪ್ರಯತ್ನವು ಕುರುಡರು ಐರಾವತವನ್ನು ಗುರುತಿಸಿದ ಹಾಗಾಗುತ್ತದೆ. ಹಾಗಿದ್ದರೂ ಸಹ ಬಸವಣ್ಣನವರ ವಚನಗಳ ಮೂಲಕ ಆ ಮಹಾಪುರುಷನು ನಡೆದ ಹೆಜ್ಜೆಯ ಗುರುತುಗಳನ್ನು ಕೆಲ ಮಟ್ಟಿಗಾದರೂ ಕಾಣಬಹುದು. ಬಸವಣ್ಣನವರ ಸಾಧನೆಗಳ ಮೂರು ಮುಖಗಳನ್ನು ಗುರುತಿಸುವ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆ ಮೂರು ಮುಖಗಳು ಹೀಗಿವೆ:
() ಸಾಮಾಜಿಕ ಕ್ರಾಂತಿ
() ವಚನಸಾಹಿತ್ಯನಿರ್ಮಾಣ
() ಆಧ್ಯಾತ್ಮಿಕ ಸಾಧನೆ


ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಐದು ಘಟ್ಟಗಳನ್ನು ನಾವು ಈ ರೀತಿಯಾಗಿ ಅರ್ಥೈಸಿಕೊಳ್ಳಬಹುದು:
() ಸನಾತನ ಸಂಪ್ರದಾಯದ ಹಾಗು ವಾಮಮಾರ್ಗಗಳ ತಿರಸ್ಕಾರ
() ಹೊಸ ಮಾರ್ಗದ ನಿರ್ಮಾಣ
() ಹೊಸಮಾರ್ಗದ ನೀತಿಸಂಹಿತೆಯ ನಿರ್ಮಾಣ
() ಸಾಮಾಜಿಕ ಮೇಲುಕೀಳು ಭಾವನೆಯನ್ನು ನಿರ್ಮೂಲನೆ.
() ತತ್ವದರ್ಶನ

() ಸನಾತನ ಸಂಪ್ರದಾಯದ ತಿರಸ್ಕಾರ:
ಬಸವಣ್ಣನವರ ಕಾರ್ಯವನ್ನು ಕ್ರಾಂತಿ ಎಂದು ಕರೆಯಬಹುದೆ ಅಥವಾ ಸಮಾಜಸುಧಾರಣೆ ಎಂದು ಕರೆಯಬಹುದೆ? ಇದೊಂದು ಅತಿ ನವೀನ ಮಾರ್ಗ. ತಳವರ್ಗದವರಿಗೆ ದೇವಾಲಯಗಳಲ್ಲಿ ಪ್ರವೇಶವಿಲ್ಲವೆ? ಸರಿ, ಉಚ್ಚಕುಲದವರು ಎಂದು ಹೊಗಳಿಕೊಳ್ಳುತ್ತಿರುವ ಅಧಮರ ಡಂಭಾಚಾರದ ದೇವಾಲಯಗಳೇ ನಮಗೆ ಬೇಡ; ನಮ್ಮ ದೇಹವನ್ನೇ ದೇವಾಲಯ ಎಂದು ಭಾವಿಸೋಣ, ದೇವಾಲಯಕ್ಕೆನನ್ನ ಕಾಲೇ ಕಂಭ, ಶಿರವೇ ಹೊನ್ನ ಕಳಸವಯ್ಯಾ; ಇಲ್ಲಿರುವ ಶಿವನನ್ನೇ ಪೂಜಿಸೋಣ’, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ,……. ಎನ್ನುವುದು ಬಸವ-ಮಾರ್ಗ!

ಕಲ್ಲುಮಣ್ಣಿನಲ್ಲಿ ಕಟ್ಟಿದ ದೇವಾಲಯಗಳು ಇಂದಿಲ್ಲ ನಾಳೆ ಬಿದ್ದು ಹೋದಾವು, ಆದರೆನನ್ನ ದೇಹವಿರುವವರೆಗೆ ನನ್ನ ದೇಗುಲ ಇದ್ದೇ ಇರುತ್ತದೆ. ನನ್ನ ದೇವರು ದೇಹದಲ್ಲಿಯೇ ಇರುತ್ತಾನೆಎಂದು ಬಸವಣ್ಣನವರು ಸಾರಿದರು. ಜಂಗಮ ಪದಕ್ಕೆ ಚಲಿಸುತ್ತಿರುವ ಎನ್ನುವ ಅರ್ಥವಿರುವಂತೆಯೇ, ‘ವೀರಶೈವ ಶರಣರುಎನ್ನುವ ಅರ್ಥವೂ ಇದೆ. ಜಂಗಮರು ಸರ್ವತ್ಯಾಗಿಗಳಾಗಿ ಸಂಚಾರ ಮಾಡುತ್ತಿರುವವರು, ಲಿಂಗದೀಕ್ಷೆ ಕೊಡುವಂಥವರು, ಗುರುವಿನಂತೆ ಮಾರ್ಗದರ್ಶನ ಮಾಡಬಲ್ಲವರು. ರೀತಿಯಾಗಿ ಬಸವಣ್ಣನವರು ದೇವಾಲಯಸಂಸ್ಕೃತಿಯನ್ನು ಹಾಗು ಅರ್ಚಕಪಾರಮ್ಯವನ್ನು ತಿರಸ್ಕರಿಸಿದರು.  ಗಾಂಧೀಜಿ, ಅಂಬೇಡಕರ ಮೊದಲಾದವರದೇವಾಲಯ ಪ್ರವೇಶಚಳುವಳಿಗಿಂತ ಭಿನ್ನವಾದ ವಿಧಾನವಿದು. ಇದು ಸಂಘರ್ಷದ ಮಾರ್ಗವಲ್ಲ, ಸ್ವತಂತ್ರ ನಡೆಯ ಮಾರ್ಗ!

ಸ್ವತಂತ್ರ ನಡೆಯ ಮೊದಲ ಹೆಜ್ಜೆಯಾಗಿ ಸನಾತನಿಗಳ ಮೂಢನಂಬಿಕೆಗಳನ್ನು ಬಸವಣ್ಣನವರು ತಿರಸ್ಕರಿಸಿದ ರೀತಿಯನ್ನು ನೋಡಿರಿ:
ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ!

ರೀತಿಯಾಗಿ ಶುಭಮುಹೂರ್ತ, ಶುಭಲಗ್ನ ಎನ್ನುವ ಭ್ರಮೆಗಳನ್ನು ಬಸವಣ್ಣನವರು ತಿರಸ್ಕರಿಸಿದ್ದೇ ಅಲ್ಲದೆ, ಜನಸಾಮಾನ್ಯರಿಗೆ ವೈಚಾರಿಕತೆಯ ಮಾರ್ಗವನ್ನು ತೆರೆದು ತೋರಿಸಿದರು; ಶತಮಾನಗಳಿಂದ ರೂಢವಾದ ಸಾಂಪ್ರದಾಯಕ ಮೂಢನಂಬಿಕೆಗಳನ್ನು ಹೀಗಳೆದರು.  ಇದಕ್ಕೊಂದು ಉದಾಹರಣೆಯಾಗಿ ಅವರ ಮತ್ತೊಂದು  ವಚನವನ್ನು ನೋಡಬಹುದು:
ಕಲ್ಲ ನಾಗರ ಕಂಡರೆ ಹಾಲನೆರೆಯಂಬರು,
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ!
ಉಂಬ ಜಂಗಮ ಬಂದರೆ ನಡೆಯೆಂಬೆರು,
ಉಣ್ಣದ ಲಿಂಗಕ್ಕೆ ಬೋನವ ಎಡೆ ಹಿಡಿಯೆಂಬರಯ್ಯಾ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನ ಮಾಡಿದರೆ,
ಕಲ್ಲು ತಾಗಿದ ಮಿಟ್ಟೆಯಂತಪ್ಪರಯ್ಯಾ.

ಪಾಪಪುಣ್ಯಗಳೆಂಬ ಹೆದರಿಕೆಯನ್ನು ಹುಟ್ಟಿಸುವ ಅರ್ಚಕವೃಂದಕ್ಕೆ ಪ್ರತಿಯಾಗಿ ಬಸವಣ್ಣನವರು ಹೀಗೆ ಹೇಳುತ್ತಾರೆ:
ದೇವಲೋಕ, ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ,
ಸತ್ಯವ ನುಡಿವುದೇ ದೇವಲೋಕ,
ಮಿಥ್ಯವ ನುಡಿವುದೇ ಮರ್ತ್ಯಲೋಕ;
ಆಚಾರವೇ ಸ್ವರ್ಗ, ಅನಾಚಾರವೇ ನರಕ.
ಕೂಡಲಸಂಗಮದೇವಾ, ನೀವೇ ಪ್ರಮಾಣು.

ಸ್ವರ್ಗ ಎನ್ನುವ ಕಲ್ಪನೆಯೆ ಒಂದು ಭ್ರಮೆ. ಇಲ್ಲದ ಸ್ವರ್ಗಕ್ಕಾಗಿ ದೇಹದಂಡನೆಯಿಂದ  ಅಥವಾ
ಮನಃಶುದ್ಧಿಯಿಲ್ಲದೆ ಮಾಡುತ್ತಿರುವ ವ್ರತೋಪವಾಸಗಳಿಂದ ಫಲವಿಲ್ಲ ಎಂದು ಜನಸಾಮಾನ್ಯರಿಗೆ ತಿಳಿ ಹೇಳಿದರು:
ಹುತ್ತವ ಬಡಿದರೆ ಹಾವು ಸಾಯಬಲ್ಲುದೆ ಅಯ್ಯಾ?
ಅಘೋರ ತಪವ  ಮಾಡಿದೊಡೇನು?
ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮ ದೇವ?
(ಸನಾತನ ಸಂಪ್ರದಾಯದಲ್ಲಿ ಹಾವು ಎನ್ನುವ ಪ್ರತಿಮೆಯನ್ನು ಮೂಲಾಧಾರದಲ್ಲಿ ಮಲಗಿರುವಕುಂಡಲಿನಿಗೆ ಹೋಲಿಸಲಾಗುತ್ತದೆ. ಬಸವಣ್ಣನವರು ಇದನ್ನು ಕಾಮ(lust)ಕ್ಕೆ ಹೋಲಿಸುತ್ತಿದ್ದಾರೆ. ಇದು ಆಧುನಿಕ ಮನೋವಿಜ್ಞಾನಿ ಫ್ರಾ^ಯ್ಡನ ಕಲ್ಪನೆಗೆ ಹೊಂದುತ್ತದೆ.)

ಅರ್ಚಕರಿಂದಲೇ ದೇವರ ಪೂಜೆಯನ್ನು ಮಾಡಿಸಬೇಕು, ಭಕ್ತರು ದೂರ ನಿಂತು ನೋಡಬೇಕು ಎನ್ನುವ ಸಂಪ್ರದಾಯವನ್ನು ಬಸವಣ್ಣನವರು ದೂರವಿಡುವುದು ರೀತಿಯಲ್ಲಿ:
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು
ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವವರಲ್ಲದೆ
ನಿಮ್ಮನೆತ್ತ ಬಲ್ಲರು, ಕೂಡಲಸಂಗಮದೇವಾ?

ಭಕ್ತಿಯ   ಕೈಂಕರ್ಯವು ಶ್ರದ್ಧಾಪೂರ್ವಕವಾಗಿರಬೇಕು; ದಾನಧರ್ಮಗಳು ಪೊಳ್ಳು ಆಚರಣೆಗಳಾಗಬಾರದು ಎನ್ನುವುದನ್ನು ಬಸವಣ್ಣನವರು ಹೀಗೆ ಹೇಳುತ್ತಾರೆ:
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ!
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

ಬಸವಣ್ಣನವರು ಕೇವಲ ವೈದಿಕ ಸಂಪ್ರದಾಯವನ್ನು ಧಿಕ್ಕರಿಸಿದರು ಅಂತಲ್ಲ. ಕಾಲದಲ್ಲಿ ಕಾಳಾಮುಖ ಮೊದಲಾದ ಪಂಥಗಳ ಪ್ರಭಾವವು ಅವೈದಿಕರ ಮೇಲೆ ಗಾಢವಾಗಿತ್ತು. ಬಸವಣ್ಣನವರು ಜನಸಾಮಾನ್ಯರನ್ನು ಪಂಥಗಳಿಂದ ವಿಮುಖರಾಗಿಸಲು ಸಹ ಪ್ರಯತ್ನಪಟ್ಟರು. ದಯೆಯಿಲ್ಲದ ಧರ್ಮವಾವುದಯ್ಯಾ ಎನ್ನುವ ಅವರ ವಚನವು ವಾಮಾಚಾರ ಮಾರ್ಗಗಳಲ್ಲಿ ಅಡಗಿರುವ ಪ್ರಾಣಿಹಿಂಸೆಯ ವಿರುದ್ಧವಾಗಿದೆ. ಸಕಲ ಜೀವಿಗಳಲ್ಲಿ ಲೇಸನೆ ಬಯಸುವ ನಮ್ಮ ಕೂಡಲ ಸಂಗಮ ದೇವಎಂದು ಹೇಳುವ ಮೂಲಕ ಬಸವಣ್ಣನವರು ಪ್ರಾಣಿಬಲಿಯನ್ನು ತಿರಸ್ಕರಿಸಿದ್ದಾರೆ. ಬಸವಣ್ಣನವರ ವಚನವನ್ನೂ ನೋಡಿರಿ:
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿ ಮಸಣಿಯ ಭಕ್ತೆ!
ಗಂಡ ಕೊಂಬುದು ಪಾದೋದಕ ಪ್ರಸಾದ,
ಹೆಂಡತಿ ಕೊಂಬುದು ಸುರೆ, ಮಾಂಸ!
ಭಾಂಡ, ಭಾಜನ ಶುದ್ಧವಿಲ್ಲದ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ!
ಕೂಡಲಸಂಗಮದೇವಾ.

() ಹೊಸ ಮಾರ್ಗದ ನಿರ್ಮಾಣ:
ಸನಾತನ ಸಂಪ್ರದಾಯವನ್ನು ತಿರಸ್ಕರಿಸುವುದು ಸರಿಯೇ. ಆದರೆ ಇದಕ್ಕೆ ಪ್ರತಿಯಾಗಿ ವೈಯಕ್ತಿಕವಾಗಿ ಹಾಗು ಸಾರ್ವಜನಿಕವಾಗಿ ಹಿತಕರವಾದ ಒಂದು ಹೊಸ ಮಾರ್ಗವನ್ನು ತೋರಿಸುವುದು ಅತಿ ಮುಖ್ಯ. ಅಂತರಂಗದ ಪೂಜೆ ಸರಿಯೇ, ಆದರೆ ಬಹಿರಂಗದ ಪ್ರತೀಕವೂ ಒಂದು ಬೇಕಲ್ಲವೆ? ಲಿಂಗಧಾರಣೆಯೇ ಇದಕ್ಕಿರುವ ಉಪಾಯ. ಬ್ರಹ್ಮಾಂಡಗಳನ್ನು ಮೀರಿದ ಪರಮಾತ್ಮನನ್ನು  ಚುಟುಕೀಕರಿಸಿ, ಹೃದಯದ ಮೇಲೆ ಧರಿಸುವುದೇ ಉಪಾಯ. ದೇಹವೆನ್ನುವ ದೇವಾಲಯದ ಒಳಗಿರುವವನು ಶಿವ, ದೇಹದ ಮೇಲಿರುವುದು ಲಿಂಗ. ಎಂತಹ ಭಾವಾವೇಶದಿಂದ ಬಸವಣ್ಣನವರು ಶಿವನನ್ನು ನೆನೆಯುತ್ತಿದ್ದಾರೆ ನೋಡಿರಿ:
ಜಗದಗಲ  ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀಮುಕುಟ!
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲ ಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!

ಲಿಂಗವೆನ್ನುವುದು ಕೇವಲ ಪ್ರತಿಮೆಯಲ್ಲ; ಅದು ನಿಜವಾಗಿಯೂ ಶಿವನೇ ಎನ್ನುವ ಭಕ್ತಿಪಾರಮ್ಯವನ್ನು ನಾವು ವಚನದಲ್ಲಿ ಕಾಣಬಹುದು.
ಅಂತರಂಗದೊಳಗಿರ್ದ ನಿರವಯವಲಿಂಗವನು
ಸಾವಯವ ಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು;
ಮೂಲಚೈತನ್ಯವೆ ಭಾವಲಿಂಗವು
ಇದನರಿದು ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನುದಾದಲ್ಲದೆ, ಇದಿರಿಟ್ಟು ತೋರುವದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ,
ಕೂಡಲಸಂಗಮದೇವಾ.

ನನ್ನ ಕೈಯಲ್ಲಿರುವ ಲಿಂಗವಷ್ಟೇ ದೇವರೆ? ಇಡೀ ವಿಶ್ವವೇ ಆ ಚೈತನ್ಯದ ಅಭಿವ್ಯಕ್ತಿ ಎನ್ನುವ ಅರಿವನ್ನು ಭಕ್ತರಲ್ಲಿ ಮೂಡಿಸುವ ಉದ್ದೇಶದಿಂದ ಬಸವಣ್ಣನವರು ಭಕ್ತರಿಗೆ ದೇವನ ವಿಶ್ವರೂಪದರ್ಶನವನ್ನೂ ಮಾಡಿಸುತ್ತಾರೆ:
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲ ವಿಸ್ತಾರದ ರೂಹು ನೀನೇ ದೇವಾ,
ವಿಶ್ವತಶ್ಚಕ್ಷುನೀನೇ ದೇವಾ,
ವಿಶ್ವತೋಮುಖನೀನೇ ದೇವಾ,
ವಿಶ್ವತೋಬಾಹುನೀನೇ ದೇವಾ,
ವಿಶ್ವತಃಪಾದನೀನೇ ದೇವಾ, ಕೂಡಲಸಂಗಮದೇವಾ.

ದೇವಾಲಯಗಳನ್ನು, ಈ ದೇವರುಗಳನ್ನು ತಮ್ಮ ಖಾಸಗಿ ಆಸ್ತಿಯಂತೆ ಉಪಭೋಗಿಸುತ್ತಿರುವ ಅರ್ಚಕವೃಂದವನ್ನು ತಿರಸ್ಕರಿಸಿದ್ದು ಮೊದಲ ಹೆಜ್ಜೆಯಾದರೆ, ಈ ಅರ್ಚಕವೃಂದದ ವೃಥಾಚರಣೆಗಳನ್ನು ಬಯಲಿಗೆಳೆಯುವುದು ಮತ್ತೊಂದು ಹೆಜ್ಜೆ.
ಹಾರುವನ ಭಕ್ತಿ ಓಡಿನೊಳಗೆ ಅಗೆಯ ಹೊಯ್ದಂತೆ
ಕೆಳಕೆ ಬೇರೂರದು, ಮೇಲೆ ಫಲವಾಗದು.
ಪ್ರಾಣಲಿಂಗದ ಪ್ರಸಾದವ ಮುಂದಿಟ್ಟುಕೊಂಡು
ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ,
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾಎಂಬ
ಕರ್ಮಿಗಳನೇನೆಂಬೆ ಕೂಡಲಸಂಗಮದೇವಾ?

() ಹೊಸ ಮಾರ್ಗದ ನೀತಿಸಂಹಿತೆಯ ನಿರ್ಮಾಣ:
ಹೊಸ ಮಾರ್ಗದ ನಿರ್ಮಾಣವಾದರೆ ಸಾಲದು.  
ಈ ಮಾರ್ಗದಲ್ಲಿ ನಡೆಯುವ ಶರಣರಿಗೆ ಒಂದು ನೀತಿಸಂಹಿತೆ ಬೇಕು.  
ಬಸವಣ್ಣನವರು ಶರಣರಿಗೆ ಹಾಕಿಕೊಡುವ ನೀತಿಸಂಹಿತೆ ಹೀಗಿದೆ:
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ.
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಮೂಗು ಮುಚ್ಚಿಕೊಂಡು ನೀರಿನಲ್ಲಿ ಮುಳುಗುವದರಿಂದ ಕಾಯಶುದ್ಧಿಯಾಗುವುದಿಲ್ಲ; ಅಂತರಂಗ ಹಾಗು ಬಹಿರಂಗಶುದ್ಧಿಗಾಗಿ ನಮ್ಮ ವೈಯಕ್ತಿಕ ಸಾಧನೆ ಏನಿರಬೇಕು ಎನ್ನುವುದನ್ನು ಬಸವಣ್ಣನವರು ಮೇಲಿನ ವಚನದಲ್ಲಿ ಹೇಳಿದ್ದಾರೆ. ಇನ್ನು ಶರಣರ  ನಡತೆ ಹೇಗಿರಬೇಕು ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ:

ಛಲ ಬೇಕು ಶರಣಂಗೆ ಪರಧನವನೊಲೆನೆಂಬ
ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ
ಛಲ ಬೇಕು ಶರಣಂಗೆ ಪರದೈವನೊಲೆನೆಂಬ
ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೆಂಬ
ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ.

ಉಪದೇಶವನ್ನು ಇತರರಿಗೆ ಕೊಟ್ಟರೆ ಸಾಲದು. ಮೊದಲು ತಾನೇ ಅದರಂತೆ ನಡೆದು ತೋರಿಸಬೇಕು! ಅಪರಿಗ್ರಹ, ಅಸ್ತೇಯ ಇದು ಮೊದಲು ತಮ್ಮಜೀವನನೀತಿಯಾಗಬೇಕು.  ಬಸವಣ್ಣನವರು ಅದನ್ನು ತಮಗೂ ಅನ್ವಯಿಸಿಕೊಳ್ಳುತ್ತ ಹೀಗೆ ಹೇಳಿದ್ದಾರೆ :
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ!
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವಾ.
ತಮ್ಮಲ್ಲಿರುವ ಧನಸಂಪತ್ತಿಯಲ್ಲವೂ ಶರಣರಿಗೆ ಅರ್ಪಿತ, ಲೋಕಹಿತಕ್ಕಾಗಿ ಅರ್ಪಿತ ಎನ್ನುವ ಭಾವವನ್ನು ಬಸವಣ್ಣನವರು ವಚನದ ಮೂಲಕ ತೋರುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಇರುವ ಸಂಪತ್ತಿಗೆಲ್ಲ ಸಂಗಮನಾಥನೇ ಒಡೆಯ. ಆದುದರಿಂದ ಆತ ಕೊಟ್ಟದ್ದನ್ನು ಇಸಿದುಕೊಂಡು ಶರಣರಿಗಾಗಿ ವಿನಿಯೋಗಿಸುವುದೇ ಉಚಿತ ಎನ್ನುವುದನ್ನು ಬಸವಣ್ಣನವರು ವಚನದಲ್ಲಿ ಹೇಳುತ್ತಾರೆ:
ಒಡೆಯನ ಕಂಡರೆ ಕಳ್ಳನಾಗದಿರಾ, ಮನವೇ!
ಭವದ ಬಾಧೆಯ ತಪ್ಪಿಸಿಕೊಂಬರೆ
ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ಮನವೇ!
ಕೂಡಲಸಂಗನ ಶರಣರಲ್ಲಿ ಭಕ್ತಿಯ ನೋನುವಡೆ
ಕಿಂಕರನಾಗಿ ಬದುಕು ಮನವೇ!
(ಕಠೋಪನಿಷತ್ತಿನ ಒಂದು ವಾಕ್ಯವೂ ಇದೇ ಅರ್ಥವನ್ನು ಹೇಳುತ್ತದೆ: ಈಶಾವಾಸ್ಯಮಿದಂ ಸರ್ವಂ ಯತ್ಕಿಂಚದುರಿತಂ ಮಯಿ; ತೇನ ತ್ಯಕ್ತೇನ ಭುಂಜೀಥಾಃ ಮಾಗೃಧ  ಕಸ್ಯಸ್ವಿದ್ಧನಮ್|)

ಲಿಂಗಭಕ್ತಿಯಷ್ಟೇ ಸಾಲದು, ಜಂಗಮಭಕ್ತಿಯೂ ಬೇಕು. ಜಂಗಮರು ವಿರಾಗಿಗಳು; ಸನ್ನಡತೆಯನ್ನು, ಸದ್ಭಕ್ತಿಯನ್ನು ಸಾರುತ್ತ ಸಂಚರಿಸುವವರು. ಆದುದರಿಂದ ಲಿಂಗಪೂಜೆಗಿಂತ ಮೊದಲು ಜಂಗಮಪೂಜೆಯಾಗಬೇಕು.
ಜಂಗಮನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ
ಅಂಗವಣಿಯೆಂತೋ? ಶಿವ ಶಿವಾ!
ನಿಂದಿಸುವ ಪೂಜಿಸುವ ಪಾತಕವಿದು ಕೇಳಲಾಗದು.
ಗುರುವಿನ ಗುರು ಜಂಗಮ
ಇಂತೆಂದುದು ಕೂಡಲಸಂಗನ ವಚನ.

ಜಂಗಮಸೇವೆಯೆ ಗುರುಪೂಜೆಯೆಂದರಿದ,
ಜಂಗಮಸೇವೆಯೆ ಲಿಂಗಪೂಜೆಯೆಂದರಿದ,
ಜಂಗಮಸೇವೆಯೆ ತನ್ನಿರವೆಂದ,
ಜಂಗಮಸೇವೆಯೆ ತನ್ನ ನಿಜವೆಂದರಿದ,
ಜಂಗಮಸೇವೆಯೆ ಸ್ವಯವೆಂದರಿದ,
ಜಂಗಮಸೇವೆಯೆ ನಿತ್ಯಪದವೆಂದರಿದ,
ಇದು ಕಾರಣ, ನಮ್ಮ ಕೂಡಲಸಂಗಮದೇವರಲ್ಲಿ
ಜಂಗಮಪ್ರಾಣಿಯಾದ ಚಂದಯ್ಯನ ಹಳೆಮಗನಾಗಿ,
ಆತನ ಶ್ರೀಚರಣಕೆ ಶರಣೆಂದು ಶುದ್ಧನು,
ಮಹಾಮಹಿಮನ ಘನವ  ನಾನೆತ್ತ ಬಲ್ಲೆನಯ್ಯಾ, ಪ್ರಭುವೆ
ಕೂಡಲಸಂಗಮದೇವಾ?

ಅಕಸ್ಮಾತ್, ಜಂಗಮರು ಢೋಂಗಿ ಜಂಗಮರಾಗಿದ್ದರೆ? ಬಸವಣ್ಣನವರು ಜಂಗಮನನ್ನು ಅಳೆಯಲು ನಾನಾರು ಅಥವಾ ನೀವಾರು ಎಂದು ಕೇಳುತ್ತಾರೆ:
ಲಾಂಛನಕೆ ಶರಣೆಂಬೆ
ಅಂತರಂಗವ ನೀವೇ ಬಲ್ಲಿರಿ,
ಕೂಡಲಸಂಗಮದೇವಾ!
ಲಿಂಗಲಾಂಛನವನ್ನು ಧರಿಸಿದ ಜಂಗಮನು ಶಿವಸಮಾನನು. ಇದು ಬಸವಣ್ಣನವರ  ನಿಶ್ಚಿತವಾದ
ಅಭಿಮತ. ತನ್ನ ಸ್ವ-ಗುರು, ತನ್ನ ದೈವವಾದ ಲಿಂಗ ಹಾಗು ಸಮಾಜದ ಗುರುವಾದ ಜಂಗಮ ಇವರನ್ನು ಹೇಗೆ ಪೂಜಿಸಬೇಕೆಂದು ಬಸವಣ್ಣನವರು ವಚನದಲ್ಲಿ ಹೇಳಿದ್ದಾರೆ:
ತನುವ ಕೊಟ್ಟು ಗುರುವನೊಲಿಸಬೇಕು,
ಮನವ ಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮನೊಲಿಸಬೇಕು.
ತ್ರಿವಿಧವ ಹೊರಗು ಮಾಡಿ,
ಹರೆಯ ಹೊಯಿಸಿ, ಕುರುಹು ಪೂಜಿಸುವವರ ಮೆಚ್ಚ
ಕೂಡಲಸಂಗಮದೇವ.

ಮೂರು ಕ್ರಿಯೆಗಳನ್ನು ಭಕ್ತಿಯಿಂದ ಮಾಡುವವರು ಇಲ್ಲಿಯೂ ಸಲ್ಲುತ್ತಾರೆ, ಅಲ್ಲಿಯೂ ಸಲ್ಲುತ್ತಾರೆ.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ,
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ.
ಕೂಡಲಸಂಗಮದೇವಾ.

ಹಾಗೆಂದು ಶರಣಪಥವು ಸುಲಭದ ಹಾದಿಯಲ್ಲ; ಇದು ಮುಳ್ಳಿನ ಹಾದಿ. ಕೂಡಲಸಂಗಮನು ತನ್ನ ಶರಣರನ್ನು ಕಾಡುವ ಪರಿಯನ್ನು ಬಸವಣ್ಣನವರು ಹೀಗೆ ಬಣ್ಣಿಸಿದ್ದಾರೆ:
ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ,
ತಿರಿದಡೆ ನೀಡದಂತೆ ಮಾಡುವಿರಿ,
ನೀಡಿದಡೆ ಅಕ್ಕಿ ಬೀಳುವಂತೆ ಮಾಡುವಿರಿ,
ಬಿದ್ದಡೆ ನಾಯಿ ತಿಂಬಂತೆ ಮಾಡುವಿರಿ,
ನಿಮ್ಮ ಧ್ಯಾನದಲ್ಲಿ ನಾನಿಪ್ಪಂತೆ ಮಾಡುವಿರಿ
ಕೂಡಲಸಂಗಮದೇವಾ.
 ( ಸಂದರ್ಭದಲ್ಲಿ ಶಿಶುನಾಳ ಶರೀಫರ ಇದೇ ಅರ್ಥ ಕೊಡುವ ಗೀತೆಯ ಎರಡು ನುಡಿಗಳನ್ನು ನೆನೆಸಿಕೊಳ್ಳುವುದು ಸಮಂಜಸವಾಗುತ್ತದೆ.
ಬಡತನವೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ

ಗಂಡಸ್ತನ ಇಲ್ಲದಂತಾಗಲಿ
ಹೆಂಡಿರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ)

() ಸಮಾಜದಲ್ಲಿ ಬೇರೂರಿದ ಮೇಲುಕೀಳು ಭಾವನೆಯ ನಿರ್ಮೂಲನೆ:
ಬಸವಣ್ಣನವರು ಇಟ್ಟ ಹೆಜ್ಜೆಗಳಲ್ಲಿ ಇದು ಅತಿ ಮಹತ್ವದ ಹೆಜ್ಜೆಯಾಗಿದೆ. ಮನುಷ್ಯರೆಲ್ಲರೂ ಒಂದೇ; ಯಾರೂ ಮೇಲಲ್ಲ ಅಥವಾ ಕೀಳಲ್ಲ ಎನ್ನುವ ಸಂದೇಶವನ್ನು ಸಾರುವ ಸಲುವಾಗಿ ಬಸವಣ್ಣನವರು ತಮ್ಮನ್ನೇ ಮೊದಲು ಜರಿದುಕೊಳ್ಳುತ್ತಾರೆ:
ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ  ನೋಡಯ್ಯಾ,
ದಾಸಯ್ಯ ಶಿವದಾನವನೆರೆಯ  ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ
ಉನ್ನತಮಹಿಮಾ,
ಕೂಡಲಸಂಗಮದೇವಾ, ಶಿವಧೋ! ಶಿವಧೋ!

ಮುಂದುವರಿದು, ಕೀಳುಕುಲದವರೆಂದು ಕರೆಯಲಾಗುತ್ತಿದ್ದವರ ಮಗನು ತಾನೆಂದು ಹೇಳಿಕೊಳ್ಳುತ್ತಾರೆ:
ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರೂ ಹೊಲದಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವನ ಸಾಕ್ಷಿಯಾಗಿ.
( ವಚನದಲ್ಲಿ ಮತ್ತೊಂದು ತತ್ವ ಅಡಗಿದೆ. ಮದುವೆ ಎಂಬುದು ಆಡಂಬರದ ಆಚರಣೆಯಾಗಬೇಕಿಲ್ಲ. ನಿಸರ್ಗಸಹಜವಾದ ಒಲವಿನಿಂದ ಗಂಡು ಹಾಗು ಹೆಣ್ಣು ಬೆರೆಯುವುದು ಸಹ ವಿವಾಹವೇ.)

ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ.
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ?

ಆದುದರಿಂದ ಶರಣರೆಲ್ಲ ಒಂದೇ. ‘ಇವನಾರವ? ’ ಎಂದು ಕೇಳದಿರಿ.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವಎಂದೆನಿಸಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಮನೆಯ ಮಗನೆಂದೆನಿಸಯ್ಯಾ!

(ಕನ್ನಮಾರಿ ಎನ್ನುವ ಕಳ್ಳನು ಬಸವಣ್ಣನವರ ಧನಸಂಪತ್ತನು ಅಪಹರಿಸಲು ಅವರ ಮನೆಗೆ ಜಂಗಮವೇಷಧಾರಿಯಾಗಿ ಬರುತ್ತಾನೆ. ಬಸವಣ್ಣನವರು ತಮ್ಮದೆಲ್ಲವನ್ನು ಅವನೆದುರಿಗೆ ತೆರೆದಿಟ್ಟದ್ದಲ್ಲದೆ, ಅವನನ್ನು ಹಿಡಿಯಲು ಬಂದ ಬಿಜ್ಜಳನ ಸೈನಿಕರಿಂದ ಅವನನ್ನು ರಕ್ಷಿಸುತ್ತಾರೆ. ಬಸವಣ್ಣನವರ ವ್ಯಕ್ತಿತ್ವಕ್ಕೆ ಬೆರಗಾದ ಕನ್ನಮಾರಿಯು, ನಿಜವಾದ ಶರಣನಾಗಿ ಪರಿವರ್ತಿತನಾಗುತ್ತಾನೆ. ಶ್ರೀ ವ್ಯಾಸ ದೇಶಪಾಂಡೆಯವರುಇವ ನಮ್ಮವಎನ್ನುವ ತಮ್ಮ ನಾಟಕದಲ್ಲಿ ಘಟನೆಯನ್ನು ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ.)

() ತತ್ವದರ್ಶನ
ಸನಾತನ ಸಂಪ್ರದಾಯದ ಹಿಡಿತದಲ್ಲಿ ಸಿಲುಕಿ ನರಳುತ್ತಿರುವ ತಳವರ್ಗದ ಜನರಿಗೆ ಬಸವಣ್ಣನವರು ಹೊಸ ಬಾಳನ್ನುಕೊಟ್ಟರು, ಬದುಕುವ ಹೊಸ ರೀತಿಯನ್ನು ತೋರಿಸಿದರು. ಬಸವಣ್ಣನವರಿಗಿಂತಲೂ ಮೊದಲು ಸಹ ಇಂತಹ ಪ್ರಯತ್ನಗಳು ನಡೆದಿರಲಿಲ್ಲವಂತಲ್ಲ. ಬಸವಣ್ಣನವರೇ ತಮ್ಮ ವಚನದಲ್ಲಿಆದ್ಯರ ವಚನವಿರಲುಎಂದು ಇಂತಹ ಕ್ರಾಂತಿಕಾರಿಗಳನ್ನು ನೆನೆದಿದ್ದಾರೆ.
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,
ತವರಾಜದ ನೆರೆ ತೆರೆಯಂತೆ ಆದ್ಯರ ವಚನವಿರಲು,
ಬೇರೆ ಭಾವಿಯ ತೋಡಿ, ಉಪ್ಪನೀರನುಂಬುವ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲ ಸಂಗಮ ದೇವಾ.

ಹೊಸ ಪಂಥಕ್ಕೆ ತತ್ವವೊಂದರ ಅಡಿಪಾಯ ಬೇಕಷ್ಟೆ. ತತ್ವವು ಸನಾತನ ಪಂಥದ ವೇದೋಪನಿಷತ್ತುಗಳನ್ನು ಆಧರಿಸಿದ ತತ್ವವಲ್ಲ. ಬಸವಣ್ಣನವರಿಗಿಂತ ಮೊದಲಿದ್ದಆದ್ಯ ಬೋಧನೆಯು ತವರಾಜದ ನೊರೆತೆರೆಯಂತಿರಲು, ವೇದೋಪನಿಷತ್ತುಗಳ ಬೋಧನೆಯು ಉಪ್ಪುನೀರಿನಂತಿದೆ! ಬಸವಪೂರ್ವದ ಅನೇಕವಚನಕಾರರು ಸಾಮಾಜಿಕ ಅಸಮಾನತೆಯನ್ನು ಹೀಗಳೆದಿದ್ದಾರೆ. ‘ಕಾಯಕವೇ ಕೈಲಾಸಎಂದು ದುಡಿತದ ಮಹತ್ವವನ್ನು ಹೇಳಿದ್ದಾರೆ. ಬಸವಣ್ಣನವರೂ ಸಹ ಇದೇ ತತ್ವವನ್ನು ತಮ್ಮ ವಚನಗಳಲ್ಲಿ ಸಾರಿದ್ದಾರೆ. ಆದರೆ, ಇದಷ್ಟೇ ಸಾಲದು. ಭಗವಚ್ಚೈತನ್ಯದ ಗುಣಲಕ್ಷಣಗಳನ್ನು, ಪ್ರಕೃತಿನಿಯಮಗಳನ್ನು ಅರಿತುಕೊಳ್ಳಲು ಸಾಧಕನು ಬಯಸುವುದು ಸಹಜವಾಗಿದೆ. ಸನಾತನ ಸಂಪ್ರದಾಯಿಗಳು, ದೇವನು ನಿರ್ಗುಣನು ಅಥವಾ ಸಗುಣನು ಎನ್ನುವ ವಿಷಯಕ್ಕೆ ವಾದ ಮಾಡಿದ್ದಾರೆ. ದ್ವೈತ ಸರಿಯೋ ಅದ್ವೈತ ಸರಿಯೋ ಎಂದು ಚಿಂತನ ಮಾಡಿದ್ದಾರೆ. ಬಸವಣ್ಣನವರು ದೇವರ ಸಗುಣರೂಪವನ್ನು ಶರಣರ ಎದುರಿಗೆ ಇಟ್ಟರು. (ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ರಾಧಾಕೃಷ್ಣನ್ ಹೇಳಿದ ಮಾತನ್ನು ಇಲ್ಲಿ ನೆನೆಯಬೇಕು:
ಸೃಷ್ಟಿಗೆ ದೇವರು ಎಷ್ಟು ಅವಶ್ಯವೋ, ದೇವರಿಗೆ ಸೃಷ್ಟಿಯೂ ಸಹ ಅಷ್ಟೇ ಅವಶ್ಯವಾಗಿದೆ.’ ) ಇತರ ಧರ್ಮಗಳಲ್ಲಿ ದೇವನು ನಿರಾಕಾರನು. ಆದರೆ ಭಾರತೀಯ ಪಂಥಗಳಲ್ಲಿ ದೇವರು ಸಾಕಾರನಷ್ಟೇ ಅಲ್ಲ,  ದೇವರ ವೈಯಕ್ತೀಕರಣವೂ ಗಿದೆ. ಇಲ್ಲಿ ದೇವರು ಭಕ್ತನ ಮನೆಯ ಸೇವಕನೂ ಆಗಬಲ್ಲನು. (ಸಂತ ಸಖೂಬಾಯಿಯ ಕಥೆಯನ್ನೆ ನೆನೆಯಿರಿ.) ಒಡೆಯನೂ ಆಗಬಲ್ಲನು. ಪರಮ ಉದಾರನೂ ಆಗಬಲ್ಲನು. ಪೈಗೆ ಪೈ ಬಿಟ್ಟುಕೊಡದ ಶೆಟ್ಟಿಯೂ ಆಗಬಲ್ಲನು!
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಶೆಟ್ಟಿ,
ಒಮ್ಮನವಾದೊಡೆ ಒಡನೆ ನುಡಿವನು,
ಇಮ್ಮನವಾದೊಡೆ ನುಡಿಯನು.
ಕಾಣಿಯ ಸೋಲ, ಅದ್ದಗಾಣಿಯ ಗೆಲ್ಲ!
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ!
ದೇವರನ್ನು ನ್ಯಾಯಯುತ ಶೆಟ್ಟಿಗೆ ಹೋಲಿಸುವ ಮೂಲಕ ಬಸವಣ್ಣನವರು ಶರಣರನ್ನು ಎಚ್ಚರಿಸಿದ್ದಾರೆ. ಶರಣಪಥದಲ್ಲಿ ನಡೆಯುವುದು ಹಗ್ಗದ ಮೇಲಿನ ನಡಿಗೆಯಷ್ಟೇ ಕಠಿಣವಾಗಿದೆ!

ದೇವರ ಹಾಗು ಭಕ್ತನ ಸಂಬಂಧವು ಜನ್ಮದ್ದಲ್ಲ. ಇದು ಅನಾದಿಯಾದದ್ದು ಎಂದು ಬಸವಣ್ಣನವರು ತಮ್ಮ ವಚನದಲ್ಲಿಈ ರೀತಿಯಾಗಿ ಹೇಳಿದ್ದಾರೆ:
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರಸಂಹಾರದಿಂದ ಮುನ್ನ
ಹರಿವಿರಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ, ಮುನ್ನ, ಮುನ್ನ,
ಗೆಳೆಯ ನೀನು ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವಾ!
ಶಿವನು ತನ್ನ ಗೆಳೆಯನಾದರೆ, ಭಕ್ತನೂ ಸಹ ಶಿವನಷ್ಟೇ ಹಳೆಯನು!
( ಸಂದರ್ಭದಲ್ಲಿ ಕೃಷ್ಣನು ಅರ್ಜುನನಿಗೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಬಹುದು: ‘ಅರ್ಜುನಾ, ನಾನು ಹಾಗು ನೀನು ಇಬ್ಬರೂ ಅನೇಕ ಜನ್ಮಗಳನ್ನು ಎತ್ತಿದ್ದೇವೆ. ಎಲ್ಲ ಜನ್ಮಗಳನ್ನು ನಾನು ಬಲ್ಲೆ; ನೀನು ಅರಿಯೆ!)

ಶಿವನಷ್ಟೇ ಹಳೆಯನಾದ ಭಕ್ತನಿಗೆ ಶಿವನೊಡನೆ ಇದ್ದ ಸಂಬಂಧವೆಂತಹದು? ಅದನ್ನು ಬಸವಣ್ಣನವರು ವಚನದಲ್ಲಿ ಸ್ಪಷ್ಟ ಪಡಿಸುತ್ತಾರೆ:
ಅಯ್ಯಾ ನೀನು ನಿರಾಕಾರನಾಗಿರ್ದಲ್ಲಿ
ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ
ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ
ಅಯ್ಯಾ ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ
ಅಯ್ಯಾ ನೀನೆನ್ನ ಭವವ ಕೊಂದಿಹೆನೆಂದು
ಜಂಗಮಲಾಂಛನವಾಗಿ ಬಂದಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ
ಕೂಡಲಸಂಗಮದೇವಾ.

ವಚನದಲ್ಲಿ ಮೂರು ಮಾತುಗಳು ಸ್ಪಷ್ಟವಾಗಿವೆ:
() ದೇವನು ಅವ್ಯಕ್ತನೂ ಹೌದು ( ‘ಅಯ್ಯಾ, ನೀನು ನಿರಾಕಾರನಾಗಿರ್ದಲ್ಲಿ’).
() ಭಕ್ತನು ದೇವನ ವಾಹನ ಅರ್ಥಾತ್ ದೇವನಿಗೆ ವ್ಯಕ್ತರೂಪ ಪಡೆಯಲು ಭಕ್ತನು ಅವಶ್ಯಕ. (ಅಯ್ಯಾ ನೀನು ಆಕಾರವಾಗಿರ್ದಲ್ಲಿ)
() ‘ಭಕ್ತನು ಜ್ಞಾನವಾಹನ, ಚೈತನ್ಯವಾಹನ ಹಾಗು ವೃಷಭವಾಹನನಾಗಿದ್ದಾನೆಎನ್ನುವ ರೂಪಕಗಳು ಜ್ಞಾನಶಕ್ತಿ, ಇಚ್ಛಾಶಕ್ತಿ ಹಾಗು ಕ್ರಿಯಾಶಕ್ತಿ ಎನ್ನುವ ತ್ರಿವಿಧಶಕ್ತಿಗಳ ಪ್ರತೀಕಗಳಾಗಿವೆ. ಶಕ್ತಿಗಳು ಶಿವೆಯಲ್ಲಿ ಇವೆ ಎಂದು ಶಾಕ್ತದರ್ಶನಗಳು ಹೇಳುತ್ತವೆ. ಆದುದರಿಂದ ದೇವನು ಶಿವನಾದರೆ, ಭಕ್ತನು ಶಿವನ ಆರ್ಧಾಂಗಿನಿಯಾದ ಶಿವೆ!

ಅಲ್ಲಮಪ್ರಭುಗಳು ತತ್ವಜ್ಞಾನಿಗಳು. ಅವರು ನಿರಾಕಾರದಲ್ಲಿ ಬೆರೆತು ಹೋದವರು. ಆದರೆ ಬಸವಣ್ಣನವರು ಶರಣರಿಗೆ ಸುಲಭವಾಗಲೆಂದು ಸಾಕಾರಭಕ್ತಿಯನ್ನು ಪ್ರಚುರಗೊಳಿಸಿದವರು. ಅಲ್ಲಮಪ್ರಭುಗಳ ಒಂದು ವಚನದಲ್ಲಿ ಅವರು, ‘ಗುಹೇಶ್ವರ ಸತ್ತು, ನಾನುಳಿದೆಎನ್ನುತ್ತಾರೆ.

ಭಕ್ತ ಎನ್ನುವುದು ಒಂದು ಉಪಾಧಿಯಾದರೆ, ಶಿವ ಅಥವಾ ಗುಹೇಶ್ವರ ಎನ್ನುವುದೂ ಒಂದು ಉಪಾಧಿಯೇ. ಉಪಾಧಿಗಳು ಇರುವವರೆಗೆ, ಮೋಕ್ಷದ ಕೊನೆಯ ಮೆಟ್ಟಿಲು ಅಂದರೆ ಭಗವಚ್ಚೈನ್ಯದಲ್ಲಿ ಮುಳುಗಿ ಏಕರಸವಾಗುವುದು ಶಕ್ಯವಿಲ್ಲ. ಸಮರಸದ ಕ್ಷಣದಲ್ಲಿ ಉಳಿಯುವುದು ಸಚ್ಚಿದಾನಂದ ಭಾವ ಮಾತ್ರ. ಸತ್ ಅಂದರೆ ಇರುವಿಕೆ, ಚಿತ್ ಅಂದರೆ ಅರಿವು ಅರ್ಥಾತ್ ಇರುವಿಕೆಯ ಅರಿವು. ಅರಿವಿನಿಂದ ಉಂಟಾಗುವ ಆನಂದವೇ ಸಚ್ಚಿದಾನಂದವು. ಇದು ಅಲ್ಲಮಪ್ರಭುಗಳ ಅದ್ವೈತತತ್ವ.

ಬಸವಣ್ಣನವರು ವೈಯಕ್ತಿಕ ಮೋಕ್ಷವನ್ನು ಬೇಡಿದವರಲ್ಲ. ಶಿವಭಕ್ತಿಯಲ್ಲಿಯೇ ಸುಖ ಕಂಡವರು. ಸಮಾಜದ ಎಲ್ಲ ವರ್ಗದವರಿಗೂ ಶಿವನನ್ನು ತೋರಿಸಲು ಸಂಚಲಿಸಿದವರು. ಅದಕ್ಕಾಗಿ ಲಿಂಗಪೂಜೆ, ಜಂಗಮಪೂಜೆ, ಶಿವಭಕ್ತಿ ಎನ್ನುವ ಮಾರ್ಗವನ್ನು ತೋರಿಸಿದವರು. ಇದು ಬಸವಣ್ಣನವರ ದ್ವೈತ ತತ್ವ. ಸನಾತನ ಮಾರ್ಗದಲ್ಲಿ ವೈಯಕ್ತಿಕ ಸಾಧನೆಗೆ ಮಹತ್ವವಿದೆ. ಬಸವಣ್ಣನವರು ಸಮಷ್ಟಿಮಾರ್ಗದ ಸಾಧನೆಯ ಪಥವನ್ನು ತೋರಿಸಿದರು. ಇದಕ್ಕಾಗಿ ಅನುಭವಮಂಟಪವನ್ನು ರೂಪಿಸಿದರು.

ಕೆಲವು ಆಧುನಿಕರು ಬಸವಣ್ಣನನ್ನು ಬುದ್ಧನಿಗೆ ಹಾಗು ಮಾರ್ಕ್ಸನಿಗೆ ಹೋಲಿಸುತ್ತಾರೆ. ಬುದ್ಧನು ದೇವರ ಇರುವಿಕೆಯ ಬಗೆಗೆ ಏನೂ ಹೇಳಲಿಲ್ಲ. ಬಹುಶಃ ಆತನು ಅಜ್ಞೇಯವಾದಿಯಾಗಿರಬಹುದು. ಬಸವಣ್ಣನವರು ಪರಮ ಶಿವಭಕ್ತರು. ಬುದ್ಧನ ಅನುಯಾಯಿಗಳು ಭಿಕ್ಷುಗಳಾದರು. ಇದು ಸಮಾಜದ ಮೇಲೊಂದು ಭಾರ. ಆದರೆ ಬಸವಣ್ಣನವರ ಅನುಚರರು ಶರಣರಾದರು. ತಮ್ಮ ಕಾಯಕದಲ್ಲಿ ನಿಷ್ಠೆ ಉಳ್ಳವರಾದರು. ಇದು ಸಮಾಜದ ಸ್ಥೈರ್ಯದ ಹಾದಿ. (ಆದರೆ ಕ್ರಾಂತಿ ದುರಂತದಲ್ಲಿ ಕೊನೆಗೊಂಡಿದ್ದಕ್ಕಾಗಿ ಬೇರೆ ಕಾರಣಗಳಿವೆ.)

ಮಾರ್ಕ್ಸನು ಸಮತಾವಾದಿಯಾಗಿದ್ದರೂ ಸಹ ಆತನೂ ಸಹ ಧರ್ಮವನ್ನು ಹೀಗಳೆದವನೇ. ಆತನಿಂದ ಪ್ರಭಾವಿತವಾದ ಪ್ರಭುತ್ವಗಳಲ್ಲಿ ವ್ಯಕ್ತಿಗೌರವವಿಲ್ಲ. ಪ್ರತಿ ವ್ಯಕ್ತಿಯೂ ಸಮಾಜವೆನ್ನುವ ಒಂದು ಬೃಹತ್ ಯಂತ್ರದ ಒಂದು ಕ್ಷುಲ್ಲಕ ಭಾಗ ಮಾತ್ರ. ಆದುದರಿಂದ ಬಸವಣ್ಣನನ್ನು ಬುದ್ಧನಿಗಾಗಲೀ, ಮಾರ್ಕ್ಸನಿಗಾಗಲೀ ಹೋಲಿಸುವುದು ಸರಿಯಲ್ಲ.

ಇನ್ನು ಕೆಲಮಟ್ಟಿಗೆ ಶರಣಚಳುವಳಿಯನ್ನು ಯುರೋಪಿನಲ್ಲಿ ಜರುಗಿದ ಪ್ರೊಟೆಸ್ಟಂಟ ಚಳುವಳಿಗೆ ಹೋಲಿಸಬಹುದು. ಏಕೆಂದರೆ ಪ್ರೊಟೆಸ್ಟಂಟ ಚಳುವಳಿಯು ಚರ್ಚಿನ ವಿರುದ್ಧ ದೀನದಲಿತರ ಚಳುವಳಿಯಾಗಿತ್ತು. ಶರಣರ ಚಳುವಳಿಯು ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಗಳ ವಿರುದ್ಧ ಸಾಮಾನ್ಯರು ನಡೆಯಿಸಿದ ಚಳುವಳಿಯಾಗಿತ್ತು. ಬಸವಣ್ಣನವರು ಚಳುವಳಿಯ ಅಧ್ವರ್ಯುಗಳಾಗಿದ್ದರು.

ಏನೇ ಆದರೂ ನಮ್ಮ ಸಮಾಜವು ಇನ್ನೂ ಅಸಮ ಸಮಾಜವಾಗಿಯೇ ಉಳಿದಿದೆ. ಇಂತಹ ಸಂದರ್ಭದಲ್ಲಿತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’ ಎನ್ನುವ ಬಸವಣ್ಣನವರ ವಚನವು ನಮ್ಮಲ್ಲಿ ಧೈರ್ಯವನ್ನು ತುಂಬಬಲ್ಲ ಹಾಗು ಹೋರಾಟಕ್ಕಾಗಿ ಶಕ್ತಿಯನ್ನು ಪೂರೈಸಬಲ್ಲ ಸ್ಫೂರ್ತಿಯ ಸೆಲೆಯಾಗಿದೆ.